ಬಾಣ 1 -

ಒಬ್ಬ ರಾಕ್ಷಸ. ಶಿವಭಕ್ತ. ಈತ ತ್ರಿಪುರಾಸುರರಂತೆ ಗಗನ ಮಂಡಲದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿ ಅನೇಕಮಂದಿ ಸುಂದರಿಯರು ಹಾಗೂ ಅನೌಪಮ್ಯ ಎಂಬ ರಾಣಿಯೊಡಗೂಡಿ ಸುಖಸಂಕಥಾವಿನೋದಿಯಾಗಿದ್ದ. ಇದನ್ನು ನೋಡಿದ ದೇವತೆಗಳೂ ಋಷಿಗಳೂ ಬಹಳವಾಗಿ ಹೆದರಿ 'ಬಾಣನ ಪುರತ್ರಯ ಗಗನ ಮಂಡಲದಲ್ಲಿ ಚಕ್ರದಂತೆ ಸುತ್ತುತ್ತಿದೆ; ಅಪಾಯ ಯಾವಾಗಬೇಕಾದರೂ ಸಂಭವಿಸಬಹುದು; ನಾವು ಹೆದರಿದ್ದೇವೆ; ಕಾಪಾಡು ಎಂದು ಶಿವನಲ್ಲಿ ಮೊರೆಯಿಟ್ಟರು. ಆಗ ಶಿವ ನಾರದನನ್ನು ಬಾಣನಲ್ಲಿಗೆ ಕಳುಹಿಸಿ ಆತನ ಮೂಲಕ ಋಷಿಪತ್ನಿಯರ ಪಾತಿವ್ರತ್ಯ ಕುಗ್ಗಿಸುವಂತೆ ಮಾಡಿ ತನ್ನ ಗಾಂಡೀವದಿಂದ ಆ ಮೂರು ಪಟ್ಟಣಗಳೂ ಸಂಧಿಸುವ ಸಮಯ ನೋಡಿ ಬಾಣ ಪ್ರಯೋಗ ಮಾಡಿದ. ಆಗ ಪಟ್ಟಣಗಳಲ್ಲಿ ಬೆಂಕಿ ತಲೆದೋರಿದ್ದನ್ನು ಕಂಡ ಬಾಣ ಇದೆಲ್ಲ ಆ ದೇವತೆಗಳ ಕುಚೋದ್ಯವೆಂದು ತಿಳಿದು ತಾನು ಪೂಜಿಸುತ್ತಿದ್ದ ತ್ರಿಭುವನೇಶ್ವರ ಎಂಬ ಲಿಂಗವನ್ನು ತಲೆಯ ಮೇಲೆ ಹೊತ್ತು ಶಿವನ ಬಳಿಗೆ ನಡೆದ. ಬಾಣ ಶಿವನನ್ನು ಕಂಡು ಪ್ರಭು, ನಾನು ಸಾಯಲು ಹೆದರುತ್ತಿಲ್ಲ; ಆದರೆ ಈ ಲಿಂಗ ಮಾತ್ರ ಹಾಳಾಗಬಾರದು ಎಂದು ಕೈಮುಗಿದು ನಿಂತ. ಬಾಣನ ಪ್ರಾರ್ಥನೆಗೆ ಓಗೊಟ್ಟ ಶಿವ ಆತನಿಗೆ ಅಭಯ ನೀಡಿ ಇನ್ನು ಮುಂದೆ ಆತ ಸ್ವರ್ಣಪುರದಲ್ಲಿ ವಾಸಿಸುವಂತೆ ಅಪ್ಪಣೆ ಮಾಡಿ ಇತ್ತ ಅಗ್ನಿಯನ್ನು ಶಾಂತಗೊಳಿಸಿದ. ಈ ವೃತ್ತಾಂತ ಮತ್ಸ್ಯಪುರಾಣದಲ್ಲಿ ಬಂದಿದೆ.

2 ಬಲಿ ಚಕ್ರವರ್ತಿಯ ಜ್ಯೇಷ್ಠಪುತ್ರ. ಶಿವಭಕ್ತ. ಮಹಾಕಾಲ ಎಂಬುದು ಈತನ ನಾಮಾಂತರ. ಈತನಿಗೆ ಸಾವಿರ ತೋಳುಗಳಿದ್ದುವು ಎನ್ನಲಾಗಿದೆ. ಶಿವನನ್ನು ತಾಂಡವನೃತ್ಯದಿಂದ ಮೆಚ್ಚಿಸಿದ ಶಿವನ ರುದ್ರಗಣಗಳಲ್ಲಿ ಈತನೂ ಒಬ್ಬ. ತನ್ನ ಪಟ್ಟಣವನ್ನು ಕಾಪಾಡುವಂತೆಯೂ ತನಗೆ ಸಾವಿರ ತೋಳುಗಳನ್ನು ನೀಡುವಂತೆಯೂ ವರ ಪಡೆದು ಮಹಾಮಹಿಮ ಇನಿಸಿಕೊಂಡ. ಇವನಿಗೆ ಉಷೆ ಎಂಬ ಮಗಳಿದ್ದಳು. ಈಕೆಯನ್ನು ಕೃಷ್ಣನ ಮೊಮ್ಮಗ ಅನಿರುದ್ಧ ಕದ್ದು ಮದುವೆಯಾದ. ಈ ವೃತ್ತಾಂತ ಭಾಗವತ. ಹರಿವಂಶ ಹಾಗೂ ವಿಷ್ಣುಪುರಾಣಗಳಲ್ಲಿ ಬಂದಿದೆ.

3 ದಕ್ಷಬ್ರಹ್ಮ ಧರಣಿಯರಿಗೆ ಜನಿಸಿದ ದನು ಎಂಬಾಕೆಯ ಮಗ.  			
(ಎ.ವಿ.ಕೆ.; ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ